ಇಂದ್ರಜಿತು
ರಾವಣನ ಮಗ. ರಾವಣವೈರಿಯಾದ ಇಂದ್ರನನ್ನು ಜಯಿಸಿದುದರಿಂದ ಈ ಹೆಸರು. ಜನಿಸಿದ ತಕ್ಷಣ ಮೇಘದಂತೆ ನಾದಮಾಡಿದುದರಿಂದ ಮೇಘನಾದ ಎಂಬ ಹೆಸರನ್ನಿಟ್ಟಿದ್ದರು. ಹನುಮಂತ ಸೀತೆಯ ಅನ್ವೇಷಣೆಗಾಗಿ ಲಂಕೆಗೆ ಹೋದಾಗ ಅವನನ್ನು ಬಂಧಿಸಿದ. ರಾಮಾಯಣ ಯುದ್ಧದಲ್ಲಿ ಅಂಗದನನ್ನು ಪರಾಭವಗೊಳಿಸಿದ. ಇವರ ನಾಗಪಾಶದಿಂದ ರಾಮಲಕ್ಷ್ಮಣರು ಮೂರ್ಛಿತರಾದರು. ನಿಕುಳಂಭಿ ಯಾಗ ಮಾಡಿ ಮಾಯಾಸೀತೆಯನ್ನು ಸೃಷ್ಟಿಸಿ, ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಯುದ್ಧಭೂಮಿಗೆ ಕರೆತಂದ. ಸುಗ್ರೀವಾದಿ ವಾನರರಿಗೆ ಇದರಿಂದ ದಂಗು ಬಡಿಯಿತು. ಆದರೆ ಇವನ ಮಾಯಾಜಾಲವನ್ನು ಅರಿತಿದ್ದ ವಿಭೀಷಣ ಅದನ್ನು ರಹಸ್ಯವಾಗಿ ರಾಮನಿಗೆ ತಿಳಿಸಿದ. ಹನ್ನೆರಡು ವರ್ಷಗಳ ಕಾಲ ಬ್ರಹ್ಮಚರ್ಯ ಪಾಲಿಸಿದವನಿಂದಲೇ ತನಗೆ ಸಾವು ಬರಬೇಕೆಂದು ಇಂದ್ರಜಿತು ವರ ಪಡೆದಿದ್ದ. ಅದರಂತೇ ಲಕ್ಷ್ಮಣನಿಂದ ಹತನಾದ. ಬಂಗಾಳದ ಪ್ರಸಿದ್ಧ ಕವಿ ಮೈಕೇಲ್ ಮಧುಸೂದನ ದತ್ತ (1824-1857) ಇಂದ್ರಜಿತುವನ್ನು ಕುರಿತಂತೆ ಮೇಘನಾದ ವಧ ಎಂಬ ಮಹಾಕಾವ್ಯವನ್ನು ಬರೆದಿದ್ದಾನೆ. ಕುವೆಂಪು ಅವರ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಇಂದ್ರಜಿತುವಿನ ಪಾತ್ರವನ್ನು ವಿಶಿಷ್ಟ ರೀತಿಯಲ್ಲಿ ಚಿತ್ರಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ